ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA)

#SaveTheWesternGhats

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ 7ನೇ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ನಮ್ಮ ಅಧ್ಯಯನ, ಕೊಡಗು ಭೂಪ್ರದೇಶಕ್ಕೆ ಭೇಟಿ, ಇತರ ಸಂಸ್ಥೆಗಳು ಪ್ರಕಟಿಸಿರುವ ಸಂಶೋಧನೆಗಳಿಂದ ಪಡೆದ ಮಾಹಿತಿ, RTI ಮೂಲಕ ಪಡೆದ 2018ರ ತಜ್ಞರ ಸಮಿತಿ ವರದಿಯ ಪರಿಶೀಲನೆ ಹಾಗೂ ಈ ಭೂಪ್ರದೇಶಗಳಲ್ಲಿ ವಾಸಿಸುವ ಜನರೊಂದಿಗೆ ನಡೆಸಿದ ಸಂವಾದಗಳ ಆಧಾರದ ಮೇಲೆ ನಾವು ಕೆಳಗಿನ ಆಕ್ಷೇಪಣೆಗಳು ಮತ್ತು ಶಿಫಾರಸುಗಳನ್ನು ಸಲ್ಲಿಸಿದ್ದೇವೆ.

ಪಶ್ಚಿಮ ಘಟ್ಟಗಳ ಬಗ್ಗೆ ಕಾಳಜಿ ಇರುವ ಎಲ್ಲ ನಾಗರಿಕರು ನಮ್ಮ ಆಕ್ಷೇಪಣೆಗಳು ಮತ್ತು ಶಿಫಾರಸುಗಳನ್ನು ಓದಿ, ಅವುಗಳನ್ನು ಪರಿಗಣಿಸಿ ESA 7ನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸುವಂತೆ MoEFCCಗೆ ಮನವಿ ಮಾಡಬೇಕೆಂದು ಕೋರುತ್ತೇವೆ.

ಕೆಳಗಿನ ಬಟನ್ ಕ್ಲಿಕ್ ಮಾಡಿದಾಗ, ಪತ್ರದ ಪಠ್ಯವು ನಿಮ್ಮ clipboardಗೆ copy ಆಗುತ್ತದೆ. Email ತೆರೆದ ನಂತರ, ದಯವಿಟ್ಟು ಅದನ್ನು email bodyಯಲ್ಲಿ paste ಮಾಡಿ.

ಗೆ,
ಕಾರ್ಯದರ್ಶಿಗಳು,
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ,
ಇಂದಿರಾ ಪರ್ಯಾವರಣ ಭವನ, ಜೋರ್‌ಬಾಗ್ ರಸ್ತೆ,
ಅಲಿ ಗಂಜ್, ನವದೆಹಲಿ – 110003
ಇಮೇಲ್: esz-mef@nic.in

ವಿಷಯ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA): ಸಲ್ಲಿಸಲಾದ ಶಿಫಾರಸುಗಳನ್ನು ಪರಿಗಣಿಸಿ 7ನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸುವ ಕುರಿತು ಮನವಿ

ಮಾನ್ಯರೇ,

2026ರ ಜುಲೈ 27ರಂದು ಪ್ರಕಟಿಸಲಾದ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (Ecologically Sensitive Area – ESA) ಕುರಿತ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಈ ಪತ್ರವನ್ನು ಬರೆಯುತ್ತಿದ್ದೇವೆ.

ಕರ್ನಾಟಕ ಸರ್ಕಾರವು ಪ್ರಸ್ತಾವಿತ ESAಗೆ ವಿರೋಧ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ, ESA ಜಾರಿಯಾದರೆ ತಮ್ಮ ಮನೆಗಳು, ಜಮೀನು, ಕೃಷಿ ಮತ್ತು ಜೀವನೋಪಾಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಜನರಲ್ಲಿ ಸಾಕಷ್ಟು ಆತಂಕ ಮತ್ತು ಗೊಂದಲವಿದೆ. ಕರ್ನಾಟಕ ಸರ್ಕಾರವು ಏಳನೇ ಕರಡಿಗೂ ತನ್ನ ವಿರೋಧವನ್ನು ಪುನರುಚ್ಚರಿಸಿದ್ದು, MoEFCCಗೆ ಆಕ್ಷೇಪಣೆಗಳನ್ನು ಸಲ್ಲಿಸುವುದಾಗಿ ತಿಳಿಸಿದೆ.

ಜನರ ಹೆಸರಿನಲ್ಲಿ ESAಯನ್ನು ತಿರಸ್ಕರಿಸುವ ಮೊದಲು, ಅಧಿಸೂಚನೆಯಲ್ಲಿ ವಾಸ್ತಕವಿಕವಾಗಿ ಏನು ಹೇಳಲಾಗಿದೆ ಎಂಬ ಸ್ಪಷ್ಟ ಮಾಹಿತಿ ಜನರಿಗೆ ದೊರೆಯಬೇಕು ಎಂಬುದು ನಮ್ಮ ನಂಬಿಕೆ. ಪ್ರಸ್ತುತ ಅಧಿಸೂಚನೆ ಹಾಗೂ ಅದರಲ್ಲಿ ಯಾವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ, ಯಾವ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ ಮತ್ತು ಯಾವ ಚಟುವಟಿಕೆಗಳಿಗೆ ಅನುಮತಿ ಇದೆ ಎಂಬ ಸರಳ ವಿವರಣೆಯನ್ನು ಕನ್ನಡ ಮತ್ತು ಇತರ ಸಂಬಂಧಿತ ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಿ, ಪ್ರಸ್ತಾವಿತ ESA ವ್ಯಾಪ್ತಿಯ ಗ್ರಾಮಗಳ ಗ್ರಾಮ ಪಂಚಾಯಿತಿಗಳ ಮುಂದೆ ಇಡಬೇಕಾಗಿತ್ತು.

ಪ್ರಸ್ತಾವಿತ ESA ನೆಲಮಟ್ಟದಲ್ಲಿ ಏನನ್ನು ಅರ್ಥೈಸುತ್ತದೆ ಎಂಬುದನ್ನು ತಿಳಿಯಲು ನಾವೂ ಪ್ರಯತ್ನಿಸಿದ್ದೇವೆ. ಆರಂಭಿಕ ಹಂತವಾಗಿ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರಸ್ತಾವಿತ ESA ಗ್ರಾಮಗಳ ಭೌಗೋಳಿಕ ನಕ್ಷೆ (spatial mapping) ಸಿದ್ಧಪಡಿಸಿ, ಅವುಗಳನ್ನು ಈಗಿರುವ ಸಂರಕ್ಷಿತ ಪ್ರದೇಶಗಳು ಮತ್ತು ESZಗಳು, ನದಿಗಳು ಮತ್ತು ನದಿಮೂಲದ ತೊರೆಗಳು, ವನ್ಯಜೀವಿ ಸಂಚಾರ ಮಾರ್ಗಗಳು ಹಾಗೂ ಜನರ ಜೀವನೋಪಾಯಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದ್ದೇವೆ.

ನಾವು ಕಂಡುಕೊಂಡ ಸಂಗತಿಗಳು ಈ ಪ್ರದೇಶಗಳಿಗೆ ರಕ್ಷಣೆ ನೀಡುವುದು ಏಕೆ ಮುಖ್ಯ ಎಂಬುದನ್ನು ಇನ್ನಷ್ಟು ದೃಢಪಡಿಸುತ್ತವೆ.

ಉಡುಪಿ ಜಿಲ್ಲೆಯಲ್ಲಿ, ಜಿಲ್ಲೆಯ ನದಿಗಳಿಗೆ ನೀರು ಒದಗಿಸುವ ಅನೇಕ ನದಿಮೂಲದ ತೊರೆಗಳು ಪ್ರಸ್ತಾವಿತ ESA ವ್ಯಾಪ್ತಿಯ ಭೂಪ್ರದೇಶಗಳಲ್ಲಿ ಹುಟ್ಟುತ್ತವೆ. ಆದ್ದರಿಂದ ಈ ಜಲಮೂಲಗಳನ್ನು ರಕ್ಷಿಸುವುದು ಉಡುಪಿಯ ನದಿಗಳನ್ನು ಮತ್ತು ಕೆಳಭಾಗದಲ್ಲಿ ವಾಸಿಸುವ ಜನರ ಜಲಭದ್ರತೆಯನ್ನು ರಕ್ಷಿಸುವುದೂ ಆಗಿದೆ. https://forrivers.life/all-about-esa/esa-analysis-udupi-district/

ಕೊಡಗಿನಲ್ಲಿ, ಪ್ರಸ್ತಾವಿತ ESA ವ್ಯಾಪ್ತಿಯ ಅನೇಕ ನದಿಮೂಲದ ತೊರೆಗಳು ಕಾವೇರಿ ನದಿಗೆ ಸೇರುತ್ತವೆ. ಹಾಗೆಯೇ ಕೆಲವು ತೊರೆಗಳು ಕುಮಾರಧಾರಾ ಹಾಗೂ ಕೇರಳದ ನದಿಗಳತ್ತ ಹರಿಯುತ್ತವೆ. ಈ ಜಲವ್ಯವಸ್ಥೆಗಳು ಕೊಡಗಿನ ಜನರಿಗೆ ಮಾತ್ರವಲ್ಲದೆ ಜಿಲ್ಲೆಯ ಹೊರಗಿನ ಲಕ್ಷಾಂತರ ಜನರಿಗೂ ಆಧಾರವಾಗಿವೆ. https://forrivers.life/all-about-esa/esa-analysis-kodagu-district/

ನಮ್ಮ ನಕ್ಷೀಕರಣವು (mapping) ಪರಿಸರದ ದೃಷ್ಟಿಯಿಂದ ಮಹತ್ವದ ಭೂಪ್ರದೇಶಗಳು ಈಗಿರುವ ಸಂರಕ್ಷಿತ ಪ್ರದೇಶಗಳು ಮತ್ತು ESZ ಗಡಿಗಳಾಚೆಯೂ ವಿಸ್ತರಿಸಿರುವುದನ್ನು ತೋರಿಸುತ್ತದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ಧಾರಣಾ ಸಾಮರ್ಥ್ಯವನ್ನು (carrying capacity) ಅಂದಾಜಿಸಲು ರಚಿಸಲಾದ ತಜ್ಞರ ಸಮಿತಿಯ 2018ರ ವರದಿಯಲ್ಲಿಯೂ ತೊರೆಗಳು, ಜಲಮೂಲಗಳು, ಮಳೆ ಮತ್ತು ಜೀವವೈವಿಧ್ಯ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ಈ ಗ್ರಾಮಗಳಲ್ಲಿ ಅನೇಕ ಗ್ರಾಮಗಳನ್ನು ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿತ್ತು.

ಕೊಡಗಿನಲ್ಲಿ ಈ ಭೂಪ್ರದೇಶಗಳು ಪ್ರಮುಖ ವನ್ಯಜೀವಿ ಆವಾಸಸ್ಥಾನಗಳನ್ನು ಪರಸ್ಪರ ಜೋಡಿಸುತ್ತವೆ. ಮತ್ತಷ್ಟು ವಿಘಟನೆ (fragmentation) ಉಂಟಾದರೆ ಆನೆಗಳ ಸುರಕ್ಷಿತ ಸಂಚಾರ ಮಾರ್ಗಗಳು ಕಡಿಮೆಯಾಗಬಹುದು ಮತ್ತು ಮಾನವ–ಆನೆ ಸಂಘರ್ಷ ಹೆಚ್ಚಾಗಬಹುದು. ಇದರಿಂದ ಜನರ ಜೀವ, ಬೆಳೆ ಮತ್ತು ಜೀವನೋಪಾಯಕ್ಕೆ ಅಪಾಯ ಉಂಟಾಗಬಹುದು.

ನದಿಗಳು, ಅಂತರ್ಜಲ, ಅರಣ್ಯ, ವನ್ಯಜೀವಿಗಳು ಮತ್ತು ಜನರು—ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ. ಆದ್ದರಿಂದ ಈ ಭೂಪ್ರದೇಶಗಳನ್ನು ರಕ್ಷಿಸುವುದು ಜನರನ್ನು, ಜೀವನೋಪಾಯಗಳನ್ನು ಮತ್ತು ಜಲಭದ್ರತೆಯನ್ನು ರಕ್ಷಿಸುವುದೂ ಆಗಿದೆ.

ದೀರ್ಘಕಾಲದಿಂದ ಬಾಕಿ ಇರುವ ಸೆಕ್ಷನ್ 4(1) ಅರಣ್ಯ ಅಧಿಸೂಚನೆಗಳು ಹಾಗೂ ಅವುಗಳಿಂದ ಭೂಹಕ್ಕು, ವಸತಿ ಮತ್ತು ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆಯೂ ನಾವು ಕೇಳಿದ್ದೇವೆ. ಇವು ಕರ್ನಾಟಕ ಸರ್ಕಾರ ಪರಿಹರಿಸಬೇಕಾದ ಮಹತ್ವದ ಸಮಸ್ಯೆಗಳು. ಆದರೆ ಇವು ಈಗಾಗಲೇ ಅಸ್ತಿತ್ವದಲ್ಲಿರುವ ಸಮಸ್ಯೆಗಳಾಗಿದ್ದು, ಪ್ರಸ್ತಾವಿತ ESA ನಿರ್ಬಂಧಗಳೊಂದಿಗೆ ಅವುಗಳನ್ನು ಗೊಂದಲಗೊಳಿಸಬಾರದು.

ಈ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಪಶ್ಚಿಮ ಘಟ್ಟಗಳನ್ನು ರಕ್ಷಿಸುವುದು— ಇವೆರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡುವ ಪರಿಸ್ಥಿತಿ ಜನರಿಗೆ ಬರಬಾರದು. ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳು ಈ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಹರಿಸಬೇಕು. ಆದರೆ ಈ ಸಮಸ್ಯೆಗಳನ್ನು ESA ಅಧಿಸೂಚನೆಯನ್ನು ತಿರಸ್ಕರಿಸಲು ಕಾರಣವಾಗಿ ಬಳಸಬಾರದು — ವಿಶೇಷವಾಗಿ, ಆಸ್ತಿಯ ಈಗಿರುವ ಒಡೆತನ ಹಾಗೂ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂಬುದನ್ನು ಅಧಿಸೂಚನೆಯೇ ಸ್ಪಷ್ಟವಾಗಿ ಹೇಳಿರುವಾಗ.

ಆದ್ದರಿಂದ ಪ್ರಸ್ತಾವಿತ ESAಯನ್ನು ಕನಿಷ್ಠ ರಕ್ಷಣಾ ಚೌಕಟ್ಟಾಗಿ ಅಂತಿಮಗೊಳಿಸಿ, ಅದನ್ನು ಇನ್ನಷ್ಟು ಬಲಪಡಿಸಲು ಕೆಳಗಿನ ಶಿಫಾರಸುಗಳನ್ನು ಪರಿಗಣಿಸುವಂತೆ MoEFCCಗೆ ವಿನಂತಿಸುತ್ತೇವೆ.

1. ಪಶ್ಚಿಮ ಘಟ್ಟಗಳ ನದಿಗಳ ಸಹಜ ಹರಿವನ್ನು ರಕ್ಷಿಸಿ

ಪ್ರಸ್ತಾವಿತ ESA ಜಲವಿದ್ಯುತ್ ಯೋಜನೆಗಳನ್ನು ನಿಯಂತ್ರಿಸುತ್ತದೆ. ಆದರೆ ಪಂಪ್ಡ್-ಸ್ಟೋರೇಜ್ (pumped-storage), ನದಿ ತಿರುವು ಮತ್ತು ಅಂತರ-ಜಲಾನಯನ ವರ್ಗಾವಣೆ ಯೋಜನೆಗಳ ಕುರಿತು ಮೌನವಾಗಿದೆ. ಇವೆಲ್ಲವೂ ನದಿಗಳು, ಅರಣ್ಯಗಳು ಮತ್ತು ಜಲಾನಯನ ಪ್ರದೇಶಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ.

2018ರ ಕರ್ನಾಟಕ ತಜ್ಞರ ಸಮಿತಿಯು ಪಶ್ಚಿಮ ಘಟ್ಟಗಳಲ್ಲಿ, ಉಡುಪಿ ಜಿಲ್ಲೆಯನ್ನು ಒಳಗೊಂಡಂತೆ, ಅನೇಕ ಕಿರು ಜಲವಿದ್ಯುತ್ (ಮಿನಿ-ಹೈಡೆಲ್) ಯೋಜನೆಗಳ ಬಗ್ಗೆ ಹಾಗೂ ಬದಲಾದ ನದಿ ಹರಿವಿನಿಂದ ಜಲಶಾಸ್ತ್ರ, ಪರಿಸರ ಮತ್ತು ಜೀವವೈವಿಧ್ಯದ ಮೇಲೆ ಕೆಳಭಾಗದ ನದೀಮುಖಗಳವರೆಗೂ ವಿಸ್ತರಿಸುವ ಪರಿಣಾಮಗಳ ಬಗ್ಗೆ ಈಗಾಗಲೇ ಕಳವಳ ವ್ಯಕ್ತಪಡಿಸಿತ್ತು.

ಪ್ರಸ್ತಾವಿತ 2,000 ಮೆಗಾವಾಟ್ ಶರಾವತಿ Pumped Storage Project ಈ ಸಮಸ್ಯೆಯ ಪ್ರಮಾಣವನ್ನು ತೋರಿಸುತ್ತದೆ. ಈ ಯೋಜನೆ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶವನ್ನು ಒಳಗೊಂಡಿದ್ದು, ಅರಣ್ಯ ಭೂಮಿಯ ಬಳಕೆ ಬದಲಾವಣೆ, ಸುರಂಗ ನಿರ್ಮಾಣ, ಕಟ್ಟಡ ಕಾಮಗಾರಿ, ಆವಾಸಸ್ಥಾನಗಳ ವಿಘಟನೆ ಹಾಗೂ ಶರಾವತಿ ನದಿ ಮತ್ತು ಅಳಿವಿನಂಚಿನಲ್ಲಿರುವ ಸಿಂಗಳೀಕದ (Lion-tailed Macaque) ಆವಾಸಸ್ಥಾನದ ಮೇಲಿನ ಒಟ್ಟಾರೆ ಪರಿಣಾಮಗಳ ಕುರಿತು ಕಳವಳಕ್ಕೆ ಕಾರಣವಾಗಿದೆ.

2019ರಲ್ಲಿ ಕರ್ನಾಟಕ ಪಶ್ಚಿಮ ಘಟ್ಟ ಕಾರ್ಯಪಡೆ, ಎತ್ತಿನಹೊಳೆಯ ನಂತರ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಹೊಸ ನದಿ ತಿರುವು ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಶಿಫಾರಸು ಮಾಡಿತ್ತು ಮತ್ತು ಶರಾವತಿ ನೀರನ್ನು ಬೆಂಗಳೂರಿಗೆ ತಿರುಗಿಸುವಂತಹ ಪ್ರಸ್ತಾವಗಳಿಗೆ ಅನುಮತಿ ನೀಡಬಾರದು ಎಂದು ನಿರ್ದಿಷ್ಟವಾಗಿ ಹೇಳಿತ್ತು.

ನದಿಗಳನ್ನು ಕೇವಲ ವಿದ್ಯುತ್ ಉತ್ಪಾದನೆ ಅಥವಾ ತಿರುವಿಗೆ ಲಭ್ಯವಿರುವ ನೀರು ಎಂದಷ್ಟೇ ನೋಡಲಾಗದು. ಅವುಗಳ ಸಹಜ ಹರಿವನ್ನು ಬದಲಿಸುವುದು ಇಡೀ ಜಲಾನಯನ ಪ್ರದೇಶ, ಅದರ ಜೀವವೈವಿಧ್ಯ ಹಾಗೂ ಕೆಳಭಾಗದ ಜನರು ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಹುದು.

7ನೇ ಕರಡು ESA ಅಧಿಸೂಚನೆಯನ್ನು ಬಲಪಡಿಸಲು ನಮ್ಮ ಶಿಫಾರಸು: ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳ ನದಿ ವ್ಯವಸ್ಥೆಗಳಲ್ಲಿ ಯಾವುದೇ ಹೊಸ ಜಲವಿದ್ಯುತ್, pumped-storage, ನದಿ ತಿರುವು ಅಥವಾ ಅಂತರ-ಜಲಾನಯನ ವರ್ಗಾವಣೆ ಯೋಜನೆಗಳಿಗೆ ಅವಕಾಶ ನೀಡಬಾರದು. ಈಗಾಗಲೇ ಪ್ರಸ್ತಾಪಿಸಲಾದ, ಪರಿಶೀಲನೆಯಲ್ಲಿರುವ ಅಥವಾ ಯಾವುದೇ ಹಂತದ ಅನುಮೋದನಾ ಪ್ರಕ್ರಿಯೆಯಲ್ಲಿರುವ ಯೋಜನೆಗಳಿಗೂ ಇದು ಅನ್ವಯಿಸಬೇಕು.

ಪಶ್ಚಿಮ ಘಟ್ಟಗಳನ್ನು ರಕ್ಷಿಸುವುದು ಎಂದರೆ ಅದರ ಜಲಾನಯನ ಪ್ರದೇಶಗಳನ್ನು ರಕ್ಷಿಸುವುದು ಮತ್ತು ನದಿಗಳನ್ನು ಸಹಜವಾಗಿ ಹರಿಯಲು ಅವಕಾಶ ನೀಡುವುದೂ ಆಗಿದೆ.

2. ಬೃಹತ್ ರೇಖೀಯ ಮೂಲಸೌಕರ್ಯಗಳಿಂದ (major linear infrastructure) ಪಶ್ಚಿಮ ಘಟ್ಟಗಳು ಮತ್ತಷ್ಟು ಛಿದ್ರಗೊಳ್ಳದಂತೆ ರಕ್ಷಿಸಿ

ಪ್ರಸ್ತಾವಿತ ESA ಕೆಲವು ದೊಡ್ಡ ಮತ್ತು ಹೆಚ್ಚಿನ ಪರಿಣಾಮ ಬೀರುವ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. ಆದರೆ ರಸ್ತೆಗಳು, ರೈಲು ಮಾರ್ಗಗಳು ಮತ್ತು ಸುರಂಗಗಳನ್ನು ನಿರ್ದಿಷ್ಟವಾಗಿ ನಿಷೇಧಿಸಲಾಗಿಲ್ಲ.

ಪಶ್ಚಿಮ ಘಟ್ಟಗಳಲ್ಲಿ ಇವು ನಕ್ಷೆಯ ಮೇಲಿನ ಕೇವಲ ರೇಖೆಗಳಲ್ಲ. ಪರ್ವತವನ್ನು ಕತ್ತರಿಸುವುದು, ರಸ್ತೆಯನ್ನು ಅಗಲಗೊಳಿಸುವುದು ಅಥವಾ ಸುರಂಗ ಕೊರೆಯುವುದು ಅರಣ್ಯಗಳು, ವನ್ಯಜೀವಿ ಸಂಚಾರ ಮಾರ್ಗಗಳು, ಇಳಿಜಾರುಗಳು, ತೊರೆಗಳು ಮತ್ತು ಜಲಾನಯನ ಪ್ರದೇಶದಲ್ಲಿ ನೀರಿನ ಸಹಜ ಚಲನೆಯ ಮೇಲೆ ಪರಿಣಾಮ ಬೀರಬಹುದು.

ನೆಲದ ಮೇಲಾಗಲಿ ಅಥವಾ ನೆಲದ ಕೆಳಗಾಗಲಿ ನಾವು ಮಾಡುವ ಬದಲಾವಣೆಗಳು ಪರ್ವತ, ಅರಣ್ಯ, ಜೀವವೈವಿಧ್ಯ ಮತ್ತು ಅಲ್ಲಿಂದ ಹರಿಯುವ ನೀರಿನ ಮೇಲೆ ಪರಿಣಾಮ ಬೀರುತ್ತವೆ.

ಇವು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುವ ಪ್ರದೇಶಗಳೂ ಆಗಿವೆ. NRSC Landslide Atlas ಕರ್ನಾಟಕದಲ್ಲಿ 1,094 ಭೂಕುಸಿತಗಳನ್ನು ದಾಖಲಿಸಿದ್ದು, ಅವುಗಳಲ್ಲಿ 993 ಭೂಕುಸಿತಗಳು 2018ರ ಘಟನೆಗೆ ಸಂಬಂಧಿಸಿದ್ದವು. ನಕ್ಷೀಕರಣವು ಪಶ್ಚಿಮ ಘಟ್ಟಗಳುದ್ದಕ್ಕೂ ಹೆಚ್ಚಿನ ಸಾಂದ್ರತೆಯನ್ನು ತೋರಿಸುತ್ತದೆ. ಈಗಾಗಲೇ ಸೂಕ್ಷ್ಮವಾಗಿರುವ ಇಳಿಜಾರುಗಳನ್ನು ಮತ್ತಷ್ಟು ಅಸ್ಥಿರಗೊಳಿಸುವುದು ಅಲ್ಲಿ ವಾಸಿಸುವ ಜನರಿಗೆ ಅಪಾಯವನ್ನು ಹೆಚ್ಚಿಸಬಹುದು.

ನಮ್ಮ ಶಿಫಾರಸು: ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶಗಳ ಮೂಲಕ ಯಾವುದೇ ಹೊಸ ಬೃಹತ್ ರಸ್ತೆ, ರೈಲು ಮಾರ್ಗ ಅಥವಾ ಸುರಂಗ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಪ್ರಸ್ತಾಪಿತ, ಪರಿಶೀಲನೆಯಲ್ಲಿರುವ ಅಥವಾ ಯಾವುದೇ ಹಂತದ ಅನುಮೋದನೆಯಲ್ಲಿರುವ ಯೋಜನೆಗಳಿಗೂ ಇದು ಅನ್ವಯಿಸಬೇಕು.

ಆದರೆ ಗ್ರಾಮಗಳ ದೈನಂದಿನ ಸಂಚಾರಕ್ಕೆ ಅಗತ್ಯವಿರುವ ಸ್ಥಳೀಯ ರಸ್ತೆಗಳು ಅಥವಾ ಈಗಿರುವ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆಗೆ ಇದು ಅಡ್ಡಿಯಾಗಬಾರದು. ಅಂತಿಮ ಅಧಿಸೂಚನೆಯಲ್ಲಿ ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸಬೇಕು.

3. 2018ರ ಧಾರಣಾ ಸಾಮರ್ಥ್ಯ ವರದಿಯನ್ನು ಸಾರ್ವಜನಿಕಗೊಳಿಸಿ ಮತ್ತು ಅದರ ಶಿಫಾರಸುಗಳ ಮೇಲೆ ಕ್ರಮ ಕೈಗೊಳ್ಳಿ

2016ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ನೀಡಿದ ನಿರ್ದೇಶನಗಳ ನಂತರ, ಕರ್ನಾಟಕದ ಪಶ್ಚಿಮ ಘಟ್ಟಗಳ ಧಾರಣಾ ಸಾಮರ್ಥ್ಯವನ್ನು ಅಂದಾಜಿಸಲು MoEFCC ಬಹುಶಾಖಾ ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯು 2018ರ ಜುಲೈನಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು.

ಈ ಸಮಿತಿಯು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ICFRE), ಸಲೀಂ ಅಲಿ ಪಕ್ಷಿಶಾಸ್ತ್ರ ಮತ್ತು ಪ್ರಕೃತಿ ಇತಿಹಾಸ ಕೇಂದ್ರ (SACON), ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ, ಜಲ ಮತ್ತು ಭೂ ನಿರ್ವಹಣಾ ಸಂಸ್ಥೆ (WALMI), ರಾಷ್ಟ್ರೀಯ ಜಲಶಾಸ್ತ್ರ ಸಂಸ್ಥೆ, IIScಯ ಪರಿಸರ ವಿಜ್ಞಾನ ಕೇಂದ್ರ, ಕರ್ನಾಟಕ ಜೀವವೈವಿಧ್ಯ ಮಂಡಳಿ, ಪ್ರವಾಸೋದ್ಯಮ ಇಲಾಖೆ, ಮುಖ್ಯ ವನ್ಯಜೀವಿ ಪಾಲಕ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಮತ್ತು MoEF&CC — ಇವುಗಳ ಪರಿಣತಿಯನ್ನು ಒಂದೆಡೆ ತಂದಿತ್ತು.

2026ರ ಮಾರ್ಚ್‌ನ Deccan Herald ವರದಿಯ ಪ್ರಕಾರ, ಸಮಿತಿಯು ಉನ್ನತ ಮಟ್ಟದ ಕಾರ್ಯ ಗುಂಪು (High-Level Working Group) ಗುರುತಿಸಿದ್ದ 1,533 ESAಗಳನ್ನು ಪರಿಶೀಲಿಸಿ, 1,281 ಗ್ರಾಮಗಳನ್ನು ಅತ್ಯಂತ ಹೆಚ್ಚು ಪರಿಸರ ಸೂಕ್ಷ್ಮವೆಂದು ವರ್ಗೀಕರಿಸಿ, ಅಭಿವೃದ್ಧಿ ಚಟುವಟಿಕೆಗಳಿಗೆ “no go” ಪ್ರದೇಶಗಳನ್ನಾಗಿ ಶಿಫಾರಸು ಮಾಡಿತ್ತು. 26ಕ್ಕೂ ಹೆಚ್ಚು ಜಲವಿದ್ಯುತ್ ಯೋಜನೆಗಳು ಮತ್ತು ಅವುಗಳ ನದಿಗಳ ಮೇಲಿನ ಒಟ್ಟಾರೆ ಪರಿಣಾಮವನ್ನು ಪರಿಶೀಲಿಸುವ ಸಂಚಿತ-ಪರಿಣಾಮ ಮೌಲ್ಯಮಾಪನವನ್ನು (cumulative-impact assessment) ನಡೆಸಬೇಕೆಂದೂ ಸಮಿತಿ ಶಿಫಾರಸು ಮಾಡಿತ್ತು.

ಇದು MoEFCC ಸ್ವತಃ ಕೈಗೊಂಡ ಮಹತ್ವದ ಮೌಲ್ಯಮಾಪನ; ಆದರೂ ಈ ವರದಿ ಸಾರ್ವಜನಿಕವಾಗಿ ಲಭ್ಯವಿರುವಂತೆ ಕಾಣುವುದಿಲ್ಲ ಮತ್ತು ಅದರ ಶಿಫಾರಸುಗಳ ಮೇಲೆ ವ್ಯವಸ್ಥಿತವಾಗಿ ಕ್ರಮ ಕೈಗೊಂಡಂತೆಯೂ ಕಾಣುವುದಿಲ್ಲ. ಈ ವರದಿಯನ್ನು ಪರಿಗಣಿಸದೆಯೇ ಯೋಜನೆಗಳಿಗೆ ಅನುಮೋದನೆಗಳು ಮುಂದುವರಿದಿವೆ ಎಂದು ಡೆಕ್ಕನ್ ಹೆರಾಲ್ಡ್ ಮಾರ್ಚ್ 2026ರಲ್ಲಿ ವರದಿ ಮಾಡಿದೆ.

ನಮ್ಮ ಶಿಫಾರಸು: 2018ರ ಧಾರಣಾ ಸಾಮರ್ಥ್ಯ ವರದಿಯನ್ನು ಸಾರ್ವಜನಿಕಗೊಳಿಸಿ, ಅದರ ಶಿಫಾರಸುಗಳ ಮೇಲೆ ಕೈಗೊಂಡ ಕ್ರಮಗಳ ವಿವರವನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಮುಂದಿನ ಯೋಜನೆಗಳಿಗೆ ಅನುಮತಿ ನೀಡುವ ಮೊದಲು ಅದರ ಕಂಡುಹಿಡಿಕೆಗಳನ್ನು ಕಡ್ಡಾಯವಾಗಿ ಪರಿಗಣಿಸಿ.

ಈ ಭೂಪ್ರದೇಶಗಳು ಎಷ್ಟು ಒತ್ತಡವನ್ನು ತಾಳಬಲ್ಲವು ಎಂಬ ಅಧ್ಯಯನ ಈಗಾಗಲೇ ನಮ್ಮಲ್ಲಿದೆ. ಅದನ್ನು ಸಾರ್ವಜನಿಕಗೊಳಿಸಿ, ಮುಂದಿನ ನಿರ್ಧಾರಗಳಿಗೆ ಬಳಸಬೇಕು.

4. ಬೃಹತ್ ನಿರ್ಮಾಣ ಮತ್ತು ಭೂ ತೆರವಿಗೆ ಇನ್ನಷ್ಟು ಕಠಿಣ ಮಿತಿಗಳನ್ನು ವಿಧಿಸಿ

ಪ್ರಸ್ತಾವಿತ ESAಯಲ್ಲಿ ಹೊಸ ಕಟ್ಟಡ ಮತ್ತು ನಿರ್ಮಾಣ ಯೋಜನೆಗಳಿಗೆ 20,000 ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ built-up area ಇದ್ದಾಗ ಮಾತ್ರ ನಿರ್ಬಂಧ ಅನ್ವಯಿಸುತ್ತದೆ.

ಈ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು, Club Mahindra Madikeriಯ ವರದಿಯಾದ built-up area ಸುಮಾರು 22,258 ಚದರ ಮೀಟರ್. ಅಂದರೆ ಪ್ರಸ್ತುತ 20,000 ಚದರ ಮೀಟರ್ ಮಿತಿ ಸಾಮಾನ್ಯ ಮನೆಯ ಪ್ರಮಾಣವಲ್ಲ; ದೊಡ್ಡ ರೆಸಾರ್ಟ್‌ನ ನಿರ್ಮಾಣ ಪ್ರಮಾಣಕ್ಕೆ ಸಮೀಪವಾಗಿದೆ. ಇಲ್ಲಿ ರೆಸಾರ್ಟ್ ಉದಾಹರಣೆಯನ್ನು ಕೇವಲ ಈ ಪ್ರಮಾಣವನ್ನು ಅರ್ಥಮಾಡಿಸಲು ಬಳಸುತ್ತಿದ್ದೇವೆ.

ಈ ಪ್ರದೇಶಗಳಲ್ಲಿ ಈಗಾಗಲೇ ರೆಸಾರ್ಟ್‌ಗಳು, ಖಾಸಗಿ ಅಭಿವೃದ್ಧಿ ಯೋಜನೆಗಳು, ರಸ್ತೆಗಳು ಮತ್ತು ಇತರ ನಿರ್ಮಾಣಗಳಿಂದ ಭೂಬಳಕೆ ಬದಲಾವಣೆ ನಡೆಯುತ್ತಿದೆ. ಕಟ್ಟಡದ ವಿಸ್ತೀರ್ಣ ಮಾತ್ರದಿಂದ ಭೂಪ್ರದೇಶ ಎಷ್ಟು ಬದಲಾಗಿದೆ ಎಂಬುದನ್ನು ಅಳೆಯಲು ಸಾಧ್ಯವಿಲ್ಲ.

ನಿರ್ಮಿತ ಪ್ರದೇಶ ಮಿತಿಗಿಂತ ಕಡಿಮೆ ಇದ್ದರೂ ಸಹ, ಒಂದು ಅಭಿವೃದ್ಧಿ ಯೋಜನೆಯು ಸ್ಥಳೀಯ ಸಸ್ಯವರ್ಗದ ತೆರವು, ಇಳಿಜಾರುಗಳ ಕತ್ತರಿಸುವಿಕೆ, ಆಂತರಿಕ ರಸ್ತೆಗಳು ಮತ್ತು ಪಾರ್ಕಿಂಗ್ ಪ್ರದೇಶಗಳ ನಿರ್ಮಾಣ, ಭೂಮಿಗೆ ಕಾಂಕ್ರೀಟ್/ಟಾರು ಹಾಕುವಿಕೆ, ಅಂತರ್ಜಲದ ಹೊರತೆಗೆಯುವಿಕೆ ಮತ್ತು ಸಹಜ ಜಲ ಒಳಚರಂಡಿಯ ಬದಲಾವಣೆಯನ್ನು ಒಳಗೊಳ್ಳಬಹುದು.

ನಮ್ಮ ಶಿಫಾರಸು: ESAಯಲ್ಲಿ ರೆಸಾರ್ಟ್‌ಗಳು, ವಾಣಿಜ್ಯ ಪ್ರವಾಸೋದ್ಯಮ ಯೋಜನೆಗಳು, gated communities ಮತ್ತು ಇತರ ಬೃಹತ್ ಖಾಸಗಿ ಅಭಿವೃದ್ಧಿಗಳ ಗಾತ್ರಕ್ಕೆ ಮಿತಿ ವಿಧಿಸಬೇಕು. ಈಗಿರುವ 20,000 ಚದರ ಮೀಟರ್ ಮಿತಿ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ, ವಿಶೇಷವಾಗಿ ಈಗಾಗಲೇ ಹಾನಿಗೊಳಗಾದ ಭೂಪ್ರದೇಶಗಳಿಗೆ, ಅತಿಯಾಗಿ ಹೆಚ್ಚಾಗಿದೆ.

ಈ ವರ್ಗಗಳಿಗೆ ಕಡಿಮೆ ಮಿತಿ ಅನ್ವಯಿಸುವುದರ ಜೊತೆಗೆ ಎಷ್ಟು ಭೂಮಿಯನ್ನು ತೆರವುಗೊಳಿಸಬಹುದು, ಕಾಂಕ್ರೀಟ್/ಪೇವಿಂಗ್ ಮಾಡಬಹುದು ಅಥವಾ ಇತರ ರೀತಿಯಲ್ಲಿ ಬದಲಾಯಿಸಬಹುದು ಎಂಬುದಕ್ಕೂ ಮಿತಿ ಇರಬೇಕು. ತೊರೆಗಳು, ನದಿ ತೀರ ಪ್ರದೇಶಗಳು, ಸ್ಥಳೀಯ ಸಸ್ಯವರ್ಗ, ತೀವ್ರ ಇಳಿಜಾರುಗಳು ಮತ್ತು ಸಹಜ ನೀರು ಹರಿಯುವ ವ್ಯವಸ್ಥೆಗಳಿಗೆ ವಿಶೇಷ ರಕ್ಷಣೆ ನೀಡಬೇಕು.

ಆಸ್ಪತ್ರೆಗಳು, ಶಾಲೆಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಅಗತ್ಯವಿರುವ ಇತರ ಮೂಲಸೌಕರ್ಯಗಳನ್ನು ಬೃಹತ್ ವಾಣಿಜ್ಯ ಅಭಿವೃದ್ಧಿಗಳಿಗಿಂತ ಪ್ರತ್ಯೇಕವಾಗಿ ಪರಿಗಣಿಸಬೇಕು. ಸೂಕ್ತ ಪರಿಸರ ಸುರಕ್ಷತಾ ಕ್ರಮಗಳೊಂದಿಗೆ ಇವುಗಳಿಗೆ ಅವಕಾಶ ಕಲ್ಪಿಸಬೇಕು. ಸಮುದಾಯಕ್ಕೆ ಯಾವ ಮೂಲಸೌಕರ್ಯ ಅಗತ್ಯವಿದೆ ಎಂಬುದನ್ನು ನಿರ್ಧರಿಸುವಲ್ಲಿ ಗ್ರಾಮಸಭೆಗೆ ಪ್ರಮುಖ ಪಾತ್ರ ಇರಬೇಕು.

5. ಅಧಿಕೃತ ESA ಭೌಗೋಳಿಕ ದತ್ತಾಂಶವನ್ನು ಸಾರ್ವಜನಿಕವಾಗಿ ಲಭ್ಯಗೊಳಿಸಿ

ESA ಮೂಲತಃ ಭೌಗೋಳಿಕ ಗಡಿಗಳನ್ನು ಆಧರಿಸಿದ ಅಧಿಸೂಚನೆಯಾಗಿದೆ. ಆದರೂ ಪಟ್ಟಿಯಲ್ಲಿರುವ ಗ್ರಾಮದಲ್ಲಿ ವಾಸಿಸುವ ವ್ಯಕ್ತಿಗೆ ಪ್ರಸ್ತಾವಿತ ESA ಗಡಿ ನಿಖರವಾಗಿ ಎಲ್ಲಿದೆ ಮತ್ತು ತನ್ನ ಗ್ರಾಮದ ಯಾವ ಭಾಗ ಅದರ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ತಿಳಿಯುವುದು ಕಷ್ಟವಾಗಿದೆ.

ಉಡುಪಿ ಮತ್ತು ಕೊಡಗು ಜಿಲ್ಲೆಗಳ ನಮ್ಮ ವಿಶ್ಲೇಷಣೆಗೆ, ಗ್ರಾಮಗಳ ಪಟ್ಟಿ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಇತರ spatial datasets ಆಧರಿಸಿ ಪ್ರಸ್ತಾವಿತ ESAಯನ್ನು ನಾವು ಸ್ವತಃ ಭೌಗೋಳಿಕವಾಗಿ ಪುನಾರಚಿಸಬೇಕಾಯಿತು.

ನಮ್ಮ ಶಿಫಾರಸು: ಅಂತಿಮ ಅಧಿಸೂಚನೆಯೊಂದಿಗೆ ಅಧಿಕೃತ ESA ಗಡಿಗಳನ್ನು download ಮಾಡಬಹುದಾದ KML ಮತ್ತು shapefile ಅಥವಾ GeoJSON ಮುಂತಾದ ಮಾನದಂಡದ GIS ಸ್ವರೂಪಗಳಲ್ಲಿ MoEFCC ಬಿಡುಗಡೆ ಮಾಡಬೇಕು.

ಜನರು ತಮ್ಮ ಗ್ರಾಮದ ಹೆಸರನ್ನು ಹುಡುಕಿ ಅಧಿಕೃತ ESA ಗಡಿ ಮತ್ತು ಸಂಬಂಧಿತ ಅಧಿಸೂಚನೆಯ ವಿವರಗಳನ್ನು ನೋಡಬಹುದಾದ ಸರಳ ಸಾರ್ವಜನಿಕ spatial database ಮತ್ತು interactive map ಅನ್ನು ಸಹ ರಚಿಸಬೇಕು.

ಈ ಮಾಹಿತಿಯನ್ನು ಗ್ರಾಮ ಪಂಚಾಯಿತಿಗಳಿಗೆ ಕನ್ನಡ ಮತ್ತು ಇತರ ಸಂಬಂಧಿತ ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಬೇಕು.

6. ಪರಿಸರ ಸಂರಕ್ಷಣೆಯನ್ನು ಜನರಿಗೆ ಆರ್ಥಿಕವಾಗಿಯೂ ಅರ್ಥಪೂರ್ಣವಾಗಿಸಿ

ಈ ಪ್ರದೇಶಗಳಲ್ಲಿ ವಾಸಿಸುವ ಜನರು ನಮ್ಮೆಲ್ಲರಿಗೂ ಪ್ರಯೋಜನ ನೀಡುವ ಅರಣ್ಯಗಳು ಮತ್ತು ಜಲವ್ಯವಸ್ಥೆಗಳನ್ನು ರಕ್ಷಿಸುತ್ತಿದ್ದರೆ, ಪರಿಸರ ಸಂರಕ್ಷಣೆ ಅವರ ಜೀವನೋಪಾಯಕ್ಕೂ ಬೆಂಬಲ ನೀಡಬೇಕು.

UNEP, ವಿಶ್ವಸಂಸ್ಥೆಯ ಸಾಂಖ್ಯಿಕ ವಿಭಾಗ (UNSD), ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಹಾಗೂ MoEF&CCಯ ENVIS ವಿಭಾಗದ ಸಹಯೋಗದ ಭಾಗವಾಗಿ IIScಯಿಂದ ನಡೆಸಲಾದ ನೈಸರ್ಗಿಕ ಬಂಡವಾಳ ಲೆಕ್ಕಪತ್ರ ಮತ್ತು ಪರಿಸರ ವ್ಯವಸ್ಥೆ ಸೇವೆಗಳ ಮೌಲ್ಯಮಾಪನ (NCAVES) ಅಧ್ಯಯನವು, ಕೊಡಗಿನ ಅರಣ್ಯ ಮತ್ತು ಕೃಷಿ ಪರಿಸರ ವ್ಯವಸ್ಥೆಗಳಿಂದ ದೊರೆಯುವ ಸೇವೆಗಳ ಮೌಲ್ಯವನ್ನು 2019ರಲ್ಲಿ ₹14,460 ಕೋಟಿ ಎಂದು ಅಂದಾಜಿಸಿತು. ಇದರಲ್ಲಿ ₹12,892 ಕೋಟಿ, ಅಂದರೆ ಶೇ. 89ಕ್ಕೂ ಹೆಚ್ಚು, ಅರಣ್ಯಗಳಿಂದಲೇ ಬಂದಿತು. ಉಡುಪಿ ಜಿಲ್ಲೆಗೆ ಈ ಅಂದಾಜು ಮೌಲ್ಯ ಸುಮಾರು ₹14,700 ಕೋಟಿ ಆಗಿದ್ದು, ಅದರಲ್ಲಿ ₹12,300 ಕೋಟಿ, ಅಂದರೆ ಶೇ. 80ಕ್ಕೂ ಹೆಚ್ಚು, ಅರಣ್ಯಗಳಿಂದ ಬಂದಿತು.

ಇದು ಜನರಿಗೆ ನೇರವಾಗಿ ದೊರೆಯುವ ಹಣವಲ್ಲ. ನೀರು, ಅಂತರ್ಜಲ ಮರುಪೂರಣ, ಮಣ್ಣಿನ ರಕ್ಷಣೆ, ಕಾರ್ಬನ್ ಸಂಗ್ರಹಣೆ ಮತ್ತು ಇತರ ಪರಿಸರ ಸೇವೆಗಳ ಮೂಲಕ ಈ ಭೂಪ್ರದೇಶಗಳು ಒದಗಿಸುವ ಪ್ರಯೋಜನಗಳ ಅಂದಾಜು ಮೌಲ್ಯವಾಗಿದೆ.

ಇದು ಹೊಸ ಶಿಫಾರಸೂ ಅಲ್ಲ. ಕಸ್ತೂರಿರಂಗನ್ ಉನ್ನತ ಮಟ್ಟದ ಕಾರ್ಯ ಗುಂಪು, ಪಶ್ಚಿಮ ಘಟ್ಟಗಳ ESA ಮತ್ತು ESA-ಅಲ್ಲದ ಪ್ರದೇಶಗಳೆರಡರಲ್ಲೂ ಪರಿಸರ ವ್ಯವಸ್ಥೆ ಸೇವೆಗಳಿಗೆ ಪಾವತಿ (PES) ವ್ಯವಸ್ಥೆಗಳನ್ನು ನಿರ್ದಿಷ್ಟವಾಗಿ ಶಿಫಾರಸು ಮಾಡಿತ್ತು. ಈ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ರಾಜ್ಯಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಬೆಂಬಲ ನೀಡಲು ಆರ್ಥಿಕ ವ್ಯವಸ್ಥೆಗಳನ್ನೂ ಅದು ಪ್ರಸ್ತಾವಿಸಿತ್ತು. ಆರ್ಥಿಕ ಪ್ರೋತ್ಸಾಹಗಳ ವಿಷಯವು ಪಶ್ಚಿಮ ಘಟ್ಟಗಳ ESA ಬಗ್ಗೆ ರಾಜ್ಯ ಸರ್ಕಾರಗಳೊಂದಿಗಿನ MoEFCCಯ ಹಿಂದಿನ ಚರ್ಚೆಗಳಲ್ಲೂ ಪ್ರಸ್ತಾಪವಾಗಿದೆ.

ನಮ್ಮ ಶಿಫಾರಸು: ಇದನ್ನು ಅಂತಿಮ ಅಧಿಸೂಚನೆಯಲ್ಲಿ ಮುಂದಕ್ಕೆ ಕೊಂಡೊಯ್ದು, ಆರ್ಥಿಕ ಪ್ರೋತ್ಸಾಹಗಳು ಮತ್ತು ಪರಿಸರ ವ್ಯವಸ್ಥೆ ಸೇವೆಗಳಿಗೆ ಪಾವತಿ (PES)ಗಾಗಿ ಸ್ಪಷ್ಟ ವ್ಯವಸ್ಥೆಯನ್ನು ರೂಪಿಸಿ.

ಸ್ಥಳೀಯ ಮರಗಳು, ಅರಣ್ಯಗಳು, ನದಿಮೂಲದ ತೊರೆಗಳು, ನದಿ ತೀರ ಪ್ರದೇಶಗಳು ಮತ್ತು ಇತರ ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಜನರು ಮತ್ತು ಸಮುದಾಯಗಳಿಗೆ, ಅವರ ಪ್ರದೇಶಗಳ ಗಡಿಗಳನ್ನು ಮೀರಿ ದೊರೆಯುವ ಪರಿಸರ ಸೇವೆಗಳಿಗೆ ಸೂಕ್ತ ಬೆಂಬಲ ನೀಡಬೇಕು.

ಈ ಭೂಪ್ರದೇಶಗಳು ಲಕ್ಷಾಂತರ ಜನರಿಗೆ ಪ್ರಯೋಜನ ನೀಡುತ್ತಿದ್ದರೆ, ಅದರ ಮೌಲ್ಯದ ಒಂದು ಭಾಗ ಅವುಗಳನ್ನು ರಕ್ಷಿಸುವ ಜನರಿಗೂ ತಲುಪಬೇಕು.

7. ESA ಗ್ರಾಮಗಳು ಆರ್ಥಿಕವಾಗಿ ಪ್ರತ್ಯೇಕವಾಗದಂತೆ ನೋಡಿಕೊಳ್ಳಿ

ಕರ್ನಾಟಕದ ಪಶ್ಚಿಮ ಘಟ್ಟಗಳ ಧಾರಣ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ರಚಿಸಲಾಗಿದ್ದ ತಜ್ಞರ ಸಮಿತಿಯ 2018ರ ವರದಿಯು, ESA ಮತ್ತು ಪಕ್ಕದ ESA-ಅಲ್ಲದ ಗ್ರಾಮಗಳ ನಡುವೆ ಆರ್ಥಿಕ ಅಸಮಾನತೆ ಉಂಟಾಗುವ ಅಪಾಯವನ್ನು ಗುರುತಿಸಿ, ಆದ್ಯತೆಯಾಗಿ ಒಂದೇ ಪಂಚಾಯತ್‌ನೊಳಗೆ ಆರ್ಥಿಕ ಸಮೂಹೀಕರಣ (economic clustering) ಮಾಡಬೇಕೆಂದು ಶಿಫಾರಸು ಮಾಡಿತ್ತು.

ನಮ್ಮ ಶಿಫಾರಸು: ESA ಚೌಕಟ್ಟಿನಲ್ಲಿ ಈ ವಿಧಾನವನ್ನು ಸೇರಿಸಿ, ಆರೋಗ್ಯ ಸೇವೆ, ಶಿಕ್ಷಣ, ಅಗತ್ಯ ಸೇವೆಗಳು ಮತ್ತು ಈ ಪ್ರದೇಶಗಳ ಪರಿಸರ ಸೂಕ್ಷ್ಮತೆಗೆ ಹೊಂದುವ ಜೀವನೋಪಾಯ ಅವಕಾಶಗಳಲ್ಲಿ ಉದ್ದೇಶಿತ ಹೂಡಿಕೆ ಮಾಡಬೇಕು.

ಈ ವಿಧಾನವು ESA ಪ್ರದೇಶಗಳಲ್ಲಿ ಬೃಹತ್ ನಿರ್ಮಾಣದ ಮೇಲೆ ಕಠಿಣ ಮಿತಿಗಳನ್ನು ವಿಧಿಸುವುದಕ್ಕೂ ನೆರವಾಗಬಹುದು. ಆಸ್ಪತ್ರೆಗಳು, ಶಾಲೆಗಳು ಮತ್ತು ಇತರ ಅಗತ್ಯ ಸೇವೆಗಳೆಲ್ಲವೂ ESA ಒಳಗೇ ಇರಬೇಕೆಂದಿಲ್ಲ. ESA ಮತ್ತು ಪಕ್ಕದ non-ESA ಗ್ರಾಮಗಳನ್ನು ಒಟ್ಟಾಗಿ ಯೋಜಿಸುವ ಮೂಲಕ ಸುಲಭವಾಗಿ ತಲುಪಬಹುದಾದ clustersಗಳಲ್ಲಿ ಈ ಸೇವೆಗಳನ್ನು ಒದಗಿಸಬಹುದು. ಇದರಿಂದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಬೃಹತ್ ನಿರ್ಮಾಣದ ಒತ್ತಡವೂ ಕಡಿಮೆಯಾಗುತ್ತದೆ.

ESA ಗ್ರಾಮಗಳನ್ನು ರಕ್ಷಿಸುವುದು ಎಂದರೆ ಅವುಗಳನ್ನು ಅಗತ್ಯ ಸೇವೆಗಳು ಅಥವಾ ಆರ್ಥಿಕ ಅವಕಾಶಗಳಿಂದ ಪ್ರತ್ಯೇಕಿಸುವುದಲ್ಲ. ಈ ಪ್ರದೇಶಗಳನ್ನು ಮತ್ತು ಪಕ್ಕದ ವಸತಿಗಳನ್ನು ಒಟ್ಟಾಗಿ ಯೋಜಿಸಬೇಕಾಗಿದೆ.

MoEFCCಗೆ ನಮ್ಮ ಹೆಚ್ಚುವರಿ ಮನವಿಗಳು

ಕರ್ನಾಟಕ ಸರ್ಕಾರವು ಪ್ರಸ್ತಾವಿತ ESAಗೆ ವಿರೋಧ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ, ಈ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಿ, ವಾಸ್ತಕವಿಕವಾಗಿ ಏನನ್ನು ಪ್ರಸ್ತಾವಿಸಲಾಗಿದೆ ಎಂಬುದನ್ನು ಅವರೇ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ವಿಶೇಷವಾಗಿ ಮುಖ್ಯ ಎಂದು ನಾವು ನಂಬುತ್ತೇವೆ.

ಪ್ರಸ್ತುತ ಅಧಿಸೂಚನೆ ಮತ್ತು ಅದರ ಅಂಶಗಳ ಸರಳ ವಿವರಣೆಯನ್ನು ಕನ್ನಡ ಮತ್ತು ಇತರ ಸಂಬಂಧಿತ ಸ್ಥಳೀಯ ಭಾಷೆಗಳಲ್ಲಿ ಲಭ್ಯಗೊಳಿಸಿ, ಅವು ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳಿಗೆ ತಲುಪುವಂತೆ ಖಚಿತಪಡಿಸಬೇಕು ಎಂದು MoEFCCಯನ್ನು ಕೋರುತ್ತೇವೆ.

ಅಧಿಕೃತ KML/GIS ದತ್ತಾಂಶ ಹಾಗೂ ಸಾರ್ವಜನಿಕವಾಗಿ ತಲುಪಬಹುದಾದ ಪ್ರಾದೇಶಿಕ ದತ್ತಸಂಚಯ ಮತ್ತು ನಕ್ಷೆಯನ್ನು ಬಿಡುಗಡೆ ಮಾಡಬೇಕೆಂದೂ ನಾವು ಕೋರುತ್ತೇವೆ, ಇದರಿಂದ ಜನರು ಪ್ರಸ್ತಾವಿತ ಗಡಿಗಳನ್ನು ಮತ್ತು ತಮ್ಮ ಗ್ರಾಮಗಳು ಹೇಗೆ ಒಳಗೊಳ್ಳುತ್ತವೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಈ ಸಂಪನ್ಮೂಲಗಳ ರಚನೆಗಾಗಿ ESAಯ ಅಂತಿಮಗೊಳಿಸುವಿಕೆ ಕಾಯಬೇಕು ಎಂದು ನಾವು ಸೂಚಿಸುತ್ತಿಲ್ಲ. ಇವುಗಳನ್ನು ಪ್ರಕ್ರಿಯೆಯ ಜೊತೆಜೊತೆಗೇ ಬಿಡುಗಡೆ ಮಾಡಬಹುದು ಮತ್ತು ಇವು ಮತ್ತೊಂದು ವಿಳಂಬದ ಕಾರಣವಾಗಬಾರದು.

ಈ ಸಮಾಲೋಚನಾ ಪ್ರಕ್ರಿಯೆಯಲ್ಲಿ ಸ್ವೀಕರಿಸಲಾದ ಆಕ್ಷೇಪಣೆಗಳು ಮತ್ತು ಸೂಚನೆಗಳನ್ನು ಹೇಗೆ ಪರಿಗಣಿಸಲಾಗುತ್ತದೆ ಎಂಬ ಒಂದು ಮಹತ್ವದ ವಿಷಯವೂ ಇದೆ. ಕರ್ನಾಟಕ ಸರ್ಕಾರ ಪ್ರಸ್ತಾವಿತ ESAಯನ್ನು ತಿರಸ್ಕರಿಸಿದ್ದರೂ, ಪಶ್ಚಿಮ ಘಟ್ಟಗಳಿಗೆ ಈ ಕನಿಷ್ಠ ಸಂರಕ್ಷಣೆ ಬೇಕು ಎಂದು ನಂಬುವ ಮತ್ತು ಅಧಿಸೂಚನೆಯನ್ನು ಬಲಪಡಿಸಬೇಕೆಂದು ಕೇಳುವ ಅನೇಕ ಕಾಳಜಿಯುಳ್ಳ ನಾಗರಿಕರು, ಸಂಶೋಧಕರು ಮತ್ತು ಸಂಸ್ಥೆಗಳು ಕರ್ನಾಟಕದಲ್ಲಿ ಇವೆ. ನಮ್ಮಲ್ಲಿ ಹಲವರು ಈ ಅಭಿಪ್ರಾಯಗಳನ್ನು MoEFCCಗೆ ಸಲ್ಲಿಸಲು ಪ್ರಸ್ತುತ ಆಕ್ಷೇಪಣೆ ಮತ್ತು ಸೂಚನೆಯ ಅವಧಿಯನ್ನು ಬಳಸಿಕೊಳ್ಳುತ್ತಿದ್ದೇವೆ.

ಆದ್ದರಿಂದ ರಾಜ್ಯ ಸರ್ಕಾರದ ನಿಲುವನ್ನೇ ಕರ್ನಾಟಕದ ಎಲ್ಲರ ಅಭಿಪ್ರಾಯವೆಂದು ಪರಿಗಣಿಸಬಾರದು ಎಂದು ವಿನಂತಿಸುತ್ತೇವೆ.

ಕರ್ನಾಟಕದಲ್ಲಿ ವಿವಿಧ ಮತಾಭಿಪ್ರಾಯಗಳಿವೆ. ರಾಜ್ಯ ಸರ್ಕಾರವು ESAಯನ್ನು ತಿರಸ್ಕರಿಸಲು ಆಯ್ಕೆ ಮಾಡಿಕೊಂಡಿದ್ದರೂ, ಅದನ್ನು ಅಂತಿಮಗೊಳಿಸಿ ಇನ್ನಷ್ಟು ಬಲಪಡಿಸಬೇಕೆಂದು ಕೇಳುತ್ತಿರುವ ನಮ್ಮಂತಹ ಅನೇಕರು ಇದ್ದೇವೆ. ಈ ಧ್ವನಿಗಳನ್ನೂ ಅಧಿಕೃತ ದಾಖಲೆಯ ಭಾಗವಾಗಿಸಿ, ನಿರ್ಧಾರ ಪ್ರಕ್ರಿಯೆಯಲ್ಲಿ ಪರಿಗಣಿಸಬೇಕೆಂದು ಮನವಿ ಮಾಡುತ್ತೇವೆ.

ಎಲ್ಲಕ್ಕಿಂತ ಮುಖ್ಯವಾಗಿ, ಈ ಸಮಾಲೋಚನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪಶ್ಚಿಮ ಘಟ್ಟಗಳ ESAಯನ್ನು ಆದಷ್ಟು ಬೇಗ ಅಂತಿಮಗೊಳಿಸಬೇಕು ಎಂದು MoEFCCಯನ್ನು ನಾವು ಕೋರುತ್ತೇವೆ. ಪ್ರಸ್ತುತ ಕರಡು 545 ದಿನಗಳ ಶಾಸನಬದ್ಧ ಅವಧಿಯ ಕೊನೆಯವರೆಗೂ ಬಾಕಿ ಉಳಿಯುವುದಕ್ಕೆ ಅಥವಾ ಅವಧಿ ಮುಗಿದು ಮತ್ತೊಂದು ಕರಡು ಅಧಿಸೂಚನೆಗೆ ದಾರಿಯಾಗುವುದಕ್ಕೆ ಅವಕಾಶ ನೀಡಬಾರದು.

ಒಂದು ದಶಕಕ್ಕೂ ಹೆಚ್ಚು ಕಾಲ ಕರಡು ಅಧಿಸೂಚನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ, ಈ ರಕ್ಷಣೆಯನ್ನು ಇನ್ನಷ್ಟು ವಿಳಂಬಿಸಬಾರದು. ESAಯನ್ನು ಆದಷ್ಟು ಬೇಗ ಅಂತಿಮಗೊಳಿಸಿ, ಪ್ರಸ್ತುತ ಸಮಾಲೋಚನೆಯ ಮೂಲಕ ಸಲ್ಲಿಸಲಾಗುತ್ತಿರುವ ಶಿಫಾರಸುಗಳನ್ನು ಅದನ್ನು ಬಲಪಡಿಸಲು ಪರಿಗಣಿಸಬೇಕೆಂದು ಮನವಿ ಮಾಡುತ್ತೇವೆ.

ಕೇವಲ ಉಡುಪಿ ಮತ್ತು ಕೊಡಗಿನ ನಮ್ಮ ವಿಶ್ಲೇಷಣೆಯೇ ಈ ಸಂರಕ್ಷಣೆ ಏಕೆ ಮುಖ್ಯ ಎಂಬುದನ್ನು ತೋರಿಸುತ್ತದೆ. ಇವು ಬಿಡಿಬಿಡಿಯಾದ ಅರಣ್ಯದ ತುಣುಕುಗಳಲ್ಲ. ಇವು ನದಿಗಳ ಉಗಮಸ್ಥಾನಗಳು, ಜಲಾನಯನ ಪ್ರದೇಶಗಳು, ವನ್ಯಜೀವಿ ಆವಾಸಸ್ಥಾನಗಳು ಮತ್ತು ಕೃಷಿ ಹಾಗೂ ಜೀವನೋಪಾಯಕ್ಕೆ ಆಧಾರವಾಗಿರುವ ಭೂಪ್ರದೇಶಗಳು. ಜೊತೆಗೆ, ಈ ಪ್ರದೇಶಗಳ ಹೊರಗಿರುವ ಲಕ್ಷಾಂತರ ಜನರಿಗೆ ನೀರು ಮತ್ತು ಇತರ ಅನೇಕ ಪ್ರಯೋಜನಗಳನ್ನು ಒದಗಿಸುತ್ತವೆ.

ಪಶ್ಚಿಮ ಘಟ್ಟಗಳನ್ನು ರಕ್ಷಿಸುವುದು ಎಂದರೆ ಜನರನ್ನು ಮತ್ತು ನಮ್ಮ ಜಲಭದ್ರತೆಯನ್ನು ರಕ್ಷಿಸುವುದೂ ಆಗಿದೆ.

ವಂದನೆಗಳೊಂದಿಗೆ,

ಕೆಳಗಿನ ಬಟನ್ ಕ್ಲಿಕ್ ಮಾಡಿದಾಗ, ಪತ್ರದ ಸಂಪೂರ್ಣ ಪಠ್ಯವು ಸ್ವಯಂಚಾಲಿತವಾಗಿ copy ಆಗುತ್ತದೆ. Email ತೆರೆದ ನಂತರ, ದಯವಿಟ್ಟು email bodyಯಲ್ಲಿ paste ಮಾಡಿ.